ಹೊಸಹೊಳಲು
	ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಒಂದು ಹಳ್ಳಿ. ಕೃಷ್ಣರಾಜಪೇಟೆಯ ಪೂರ್ವಕ್ಕೆ 2 ಕಿಮೀ ದೂರದಲ್ಲಿದೆ.

	ಹೊಯ್ಸಳರ ಕಾಲದಲ್ಲಿ ಇದೊಂದು ಅಗ್ರಹಾರವಾಗಿತ್ತು. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿಯೇ ಒಂದು ಜೈನ ಬಸದಿ ಇದ್ದುದು 1118ರ ಒಂದು ಶಾಸನದಿಂದ ವ್ಯಕ್ತವಾಗುತ್ತದೆ. 13ನೆಯ ಶತಮಾನಕ್ಕೆ ಸೇರಿದ ಊರ ಮಧ್ಯದ ಲಕ್ಷ್ಮೀನಾರಾಯಣ ದೇವಸ್ಥಾನ, ಈಶಾನ್ಯ ಮೂಲೆಯಲ್ಲಿನ ಹರಿಹರೇಶ್ವರ ದೇವಾಲಯಗಳಿದ್ದು ಊರನ್ನು ಸುತ್ತುವರಿದ ಆ ಕಾಲದ ಕೋಟೆಯೂ ಉಳಿದು ಬಂದಿದೆ. ಗುಂಡುಕಲ್ಲುಗ ಳಿಂದ ನಿರ್ಮಿತವಾದ ಈ ಕೋಟೆಗೆ ಏಳು ಬಾಗಿಲುಗಳಿದ್ದುದಾಗಿ ತಿಳಿದುಬರುತ್ತದೆ. ವಿಜಯನಗರದ ಕಾಲದಲ್ಲಿ ಈ ಕೋಟೆಯನ್ನು ದುರಸ್ತು ಮಾಡಿದಂತೆ ತೋರುತ್ತದೆ. ಹರಿಹರೇಶ್ವರ ದೇವಾಲಯ ಈಗ ಪೂರ್ತಿಯಾಗಿ ಪಾಳುಬಿದ್ದಿದೆ. ಇಲ್ಲಿನ ಹರಿಹರೇಶ್ವರ ಮೂರ್ತಿ ಒಂದು ಸುಂದರವಾದ ವಿಗ್ರಹ. ಕೋಟೆಯ ಉತ್ತರದ್ವಾರದ ಬಳಿ 17ನೆಯ ಶತಮಾನದಲ್ಲಿ ಕಟ್ಟಿದ ವೀರಾಂಜನೇಯನ ಗುಡಿಯೊಂದಿದ್ದು ಅದರ ಎದುರಿನಲ್ಲಿ ಸು. 10 ಮೀ ನಷ್ಟು ಎತ್ತರವಾದ ಗರುಡ ಗಂಬವೊಂದು ನಿಂತಿದೆ. ಆಂಜನೇಯನ ಉತ್ಸವದ ಅಂಗವಾಗಿ ಪ್ರತಿವರ್ಷವೂ ಏಪ್ರಿಲ್ ತಿಂಗಳಿನಲ್ಲಿ ರಂಗದ ಹಬ್ಬ ಎಂಬ ಜಾತ್ರೆ ನಡೆಯುತ್ತದೆ. ಹಲವು ಬಗೆಯ ವೇಷ ತೊಟ್ಟು ರಾತ್ರಿಯೆಲ್ಲ ಹಾಡಿ ಕುಣಿದು ಓಕಳಿ ಎರಚಾಡುವುದು ಈ ಜಾತ್ರೆಯ ವಿಶೇಷ.

	ಈಗ ಈ ಊರು ಇಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯದಿಂದ ಪ್ರಸಿದ್ಧವಾಗಿದೆ. ಈ ದೇವಾಲಯ ನುಗ್ಗೇಹಳ್ಳಿ, ಸೋಮನಾಥಪುರ, ಜಾವಗಲ್ಲು, ಹಿರೇನಲ್ಲೂರು, ಅರಳಗುಪ್ಪೆ ಮೊದಲಾದ ಕಡೆ ಇರುವ ಹೊಯ್ಸಳ ದೇವಾಲಯಗಳಂತೆ ವಿಸ್ತøತವಾಗಿ ಶಿಲ್ಪಾಲಂಕರಣಗಳಿಂದ ಕೂಡಿದ ದೇವಾಲಯ. ಈ ದೇವಾಲಯವನ್ನು ಕಟ್ಟಿಸಿದ ಬಗೆಗೆ ವಿವರಗಳು ಉಳಿದುಬಂದಿಲ್ಲವಾದರೂ ಕಟ್ಟಡದ ರಚನೆ, ಶಿಲ್ಪಗಳ ಮಾಟ ಮುಂತಾದುವುಗಳಿಂದ ಇದೂ ನುಗ್ಗೇಹಳ್ಳಿ, ಜಾವಗಲ್ಲು ಅಥವಾ ಅರಳುಗುಪ್ಪೆಯ ಹೊಯ್ಸಳ ದೇವಾಲಯಗಳ ಕಾಲಕ್ಕೆ ಸೇರಿದುದೆಂದು ಹೇಳಬಹುದು; ಇದರ ಕಾಲವೂ ಸು. 13ನೆಯ ಶತಮಾನದ ಮಧ್ಯಭಾಗ. ಇಷ್ಟು ಸುಂದರವಾದ ದೇವಾಲಯವನ್ನು ಕಟ್ಟಿಸಿದವರ ವಿವರಗಳನ್ನು ತಿಳಿಸುವ ಶಾಸನವಾಗಲಿ, ಕಡೆಗೆ ಅದರ ಮೇಲಿನ ಶಿಲ್ಪಗಳನ್ನು ಕಂಡರಿಸಿದ ಶಿಲ್ಪಿಗಳ ಹೆಸರುಗಳಾಗಲಿ ಇಲ್ಲದಿರುವುದು ಆಶ್ಚರ್ಯವೇ. ಹಂಸದ ಸಾಲುಗಳಿರುವಲ್ಲಿ ಒಂದು ಕಡೆ ಬಸವ ಎಂಬ ಒಂದು ಹೆಸರು ಕೆತ್ತಿದ್ದು ಅದು ಒಬ್ಬ ರೂವಾರಿಯ ಹೆಸರಿರಬಹುದು. ಎತ್ತರವಾದ ಜಗತಿಯ ಮೇಲಿರುವ ಈ ದೇವಾಲಯ ತ್ರಿಕೂಟಾಚಲದ ವಿನ್ಯಾಸದಲ್ಲಿದೆ. ನಡುವೆ ನವರಂಗ, ಮೂರು ಕಡೆ ಮೂರು ಗರ್ಭಗೃಹಗಳು, ಮುಂದುಗಡೆ ಮುಂಚಾಚಿದ ಒಂದಂಕಣದ ಮುಖಭದ್ರ ಇವೆ. ನಡುವಿನ ಮುಖ್ಯ ಗರ್ಭಗೃಹಕ್ಕೆ ಮಾತ್ರ ಮುಂದೆ ಸುಕನಾಸಿಯೂ ಮೇಲೆ 5 ಅಂತಸ್ತಿನ ಶಿಖರವೂ ಇವೆ. ಈ ಗರ್ಭಗೃಹದ ಹೊರಗೋಡೆಗಳಲ್ಲಿ ಮೂರು ಕಡೆಯೂ ದೊಡ್ಡದಾದ ಅರೆಮಂಟಪಗಳೂ ಅವುಗಳ ಮೇಲೆ ಅರೆಗೋಪುರಗಳೂ ಇವೆ. ಗರ್ಭಗೃಹಗಳ ವಿನ್ಯಾಸ ಚೌಕಾಕಾರವಾದರೂ ಹೊರಗೋಡೆಗಳು ಮೆಟ್ಟಲುಮೆಟ್ಟಲಾಗಿ ಮುಂದೆ ಚಾಚಿದ್ದು ಕಚ್ಚುಕಚ್ಚಾದ ಮುಖಗಳನ್ನು ಹೊಂದಿವೆ. ವಿಸ್ತøತಾಲಂಕರಣವುಳ್ಳ ಹೊಯ್ಸಳ ದೇವಾಲಯಗಳಂತೆ ಇಲ್ಲಿಯೂ ಹೊರಗೋಡೆಗಳ ತಳಭಾಗದಲ್ಲಿ ಆರೇಳು ಅಡ್ಡಪಟ್ಟಿಕೆಗಳಲ್ಲಿ ಆನೆ, ಕುದುರೆ, ಬಳ್ಳಿಸುರುಳಿ, ಪೌರಾಣಿಕ, ಕಥಾಶಿಲ್ಪ, ಮಕರ, ಹಂಸ ಮೊದಲಾದ ಸಾಲುಗಳೂ ಮೇಲೆ ದೊಡ್ಡಗಾತ್ರದ ಹಲವು ಭಂಗಿಗಳಲ್ಲಿರುವ ದೇವಾನುದೇವತೆಗಳೂ ನೃತ್ಯ, ಗೀತ, ವಾದ್ಯ ಅಲಂಕರಣಗಳಲ್ಲಿ ನಿರತರಾಗಿರುವ ಸ್ತ್ರೀಪುರುಷರೂ ಲತಾವಿತಾನಗಳ ಕೆಳಗೆ ಶಿಲ್ಪಿತವಾಗಿದ್ದಾರೆ. ಅವುಗಳ ಮೇಲೆ ಒಂದು ಅಲಂಕೃತ ಕಾರ್ನೀಸೂ ಅರೆಗಂಬಗಳ ಮೇಲಿನ ಅರೆಗೋಪುರಗಳೂ ಸುಂದರವಾದ ಲೋವೆ ಮತ್ತು ಅತಿ ನವಿರಾಗಿ ಕಂಡರಿಸಿರುವ ಕೈಪಿಡಿ ಇವೆ. ಕಥನ ಶಿಲ್ಪಗಳಲ್ಲಿ ರಾಮಾಯಣ, ಭಾರತ, ಭಾಗವತ, ನರಸಿಂಹಾವತಾರ ಕಥೆಗಳಿದ್ದರೆ ದೊಡ್ಡಮೂರ್ತಿಗಳಲ್ಲಿ ಯೋಗಮಾಧವ, ಧನ್ವಂತರಿ, ನೃತ್ಯಸರಸ್ವತಿ, ಕಾಳಿಂಗಮರ್ದನ, ಪರವಾಸುದೇವ ಮುಂತಾದವು ಗಮನ ಸೆಳೆಯುತ್ತವೆ. ನವರಂಗದ ತಿರುಗಣಿಯಲ್ಲಿ ಕಡೆದ ಕಂಬಗಳ ಮೇಲೆ ನವುರಾಗಿ ಬಿಡಿಸಿರುವ ಕೀರ್ತಿಮುಖ, ಮುತ್ತಿನ ಹಾರಗಳು, ಬಳ್ಳಿಸುರುಳಿಗಳೂ ಛಾವಣಿಯ ಭುವನೇಶ್ವರಿಗಳಲ್ಲಿನ ವಿವಿಧಾಕೃತಿಯ ಕಂಡರಣೆಗಳೂ ಆಕರ್ಷಕವಾಗಿವೆ. ಮಧ್ಯದ ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯಣನ ಮೂರ್ತಿಯೂ ಬಲಗಡೆಯ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹನ ಮೂರ್ತಿಯೂ ಇದ್ದರೆ ಎಡಗಡೆಯದು ಈಗ ಬರಿದಾಗಿದೆ. ಅಲ್ಲಿ ಮೂಲದಲ್ಲಿ ವೇಣುಗೋಪಾಲನ ಮೂರ್ತಿ ಇತ್ತೆಂಬುದು, ಅದರ ಬಾಗಿಲ ಮೇಲಿನ ಮೂರ್ತಿಶಿಲ್ಪದಿಂದ ಸ್ಪಷ್ಟಪಡುತ್ತದೆ. ಈಗ ಅಲ್ಲಿ ಲೋಹದ ಸುಂದರವಾದ ಉತ್ಸವ ಮೂರ್ತಿಯ ವಿಗ್ರಹವಿದೆ. ಈ ದೇವಾಲಯದ ಮೂಲಮೂರ್ತಿಗಳೂ ಗೋಡೆಯ ಮೇಲಿನ ಮೂರ್ತಿಗಳೂ ಅಲಂಕರಣಶಿಲ್ಪಗಳೂ ನವಿರಾಗಿ ಕಂಡರಣೆಗೊಂಡಿದ್ದು ಆಕರ್ಷಕವಾಗಿವೆ.

	ಈ ಊರು ನೇಯ್ಗೆಗೂ ಹೆಸರಾಗಿದ್ದು ಇಲ್ಲಿ ತಯಾರಾಗುವ ಪಂಚೆ, ವಲ್ಲಿ ಪ್ರಸಿದ್ಧವಾಗಿವೆ.
	(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ